Tuesday, August 31, 2010

ನಾ ಕಂಡ "ಕವಲು"

ಶ್ರೀಯುತ ಎಸ್.ಎಲ್ ಭೈರಪ್ಪನವರಿಗೆ ಅಭಿನಂದನೆಗಳು, ಕವಲು ಕಾದಂಬರಿಯ ಮೂಲಕ ಪ್ರಸ್ತುತ ಸಾಮಾಜಿಕ ಜೀವನವು ಎತ್ತಣ ಸಾಗುತ್ತಿದೆ ಎಂದು ಎತ್ತಿತೋರಿಸುವ ಪ್ರಾಮಾಣಿಕ ಪ್ರಯತ್ನ ಇಲ್ಲಿ ಅಗಿದೆ ಎಂದು ನನ್ನ ಅನಿಸಿಕೆ. ಕಾಲಯಾವುದೇ ಆಗಿರಲಿ ಯುಗ ಏಷ್ಟೇ ಆಧುನಿಕವಾಗಿರಲಿ, ಯಾವ ಕಾಲದಲ್ಲಾದರೂ ಹೆಣ್ಣು ಮತ್ತು ಗಂಡು ಹೇಗಿರಬೇಕು. ಅದರಲ್ಲೂ ಎಲ್ಲಾ ಕಾಲದಲ್ಲೂ ಹೆಣ್ಣಿನ ಸ್ಥಾನಮಾನ ಮತ್ತು ಹೆಣ್ಣುತನ ಇದರ ಬಗ್ಗೆ ಬರೆದು ಮುಂದಿನ ಪೀಳಿಗೆ ಯುವಕ-ಯುವತಿಯರು ಹೇಗೆ ಆರೋಗ್ಯಕರವಾದ ಸಮಾಜವನ್ನು ಕಟ್ಟಬೇಕು ಎಂಬುದನ್ನು ಸೂಕ್ಷವಾಗಿ ಬಿಂಬಿಸಿದಂತಿದೆ.

೧. ತಮ್ಮ ಕೆಲ ಸರಕಾರಿಕಛೇರಿಗಳು ಯಾವರೀತಿ ಸಮಾಜವನ್ನು ಕಾಯಬೇಕಾದ ಕೆಲಸವನ್ನು ಬಿಟ್ಟು, ಸರಕಾರಿ ಹುದ್ದೆ ಅವರಿಗೆ ದುಡ್ಡುಮಾಡುವ ಒಂದು ಹುದ್ದೆ ಎಂದು ತಿಳಿದು, ತಮ್ಮ ಕರ್ತವ್ಯದಿಂದ ಹೇಗೆ ವಿಮುಖರಾಗಿದ್ದಾರೆ ಎಂಬುದು ತಿಳಿಯುತ್ತದೆ.

೧. ಸ್ತ್ರೀಪರ ಸಂಘಟೆಗಳಲ್ಲಿ ತೊಡಗಿಸಿಕೊಂಡಿರುವ ದೊಡ್ಡ ಹುದ್ದೆಯ, ದೊಡ್ಡ ಹೆಸರಿನ ವ್ಯಕ್ತಿಗಳ ಇನ್ನೊಂದು ಮುಖವನ್ನು ಇಲ್ಲಿ ತೋರಿಸಲಾಗಿದೆ.

೨. ನಮ್ಮ ಹೆಚ್ಚಿನ ಕಾನೂನು ಸ್ತ್ರೀ ಪರವಾಗಿದೆ, ಪೂರ್ವಾಪರ ವಿಚಾರಿಸದೆ ಹೆಣ್ಣೆಂಬ ದೃಷ್ಟಿಯಿಂದ ಅವಳಿಗೆ ಹೆಚ್ಚಿನ ಸಹಕಾರ ನೀಡುತ್ತಿದೆಯೋ ಇಲ್ಲಾ ಅಲ್ಲೂ ಕಾನೂನಿ ಹೆಸರಿನಲ್ಲಿ ಹೆಣ್ಣಿನ ಮೇಲೆ ದಬ್ಬಾಳಿಕೆ ನಡೆಸುವರೋ ತಿಳಿಯದು.

೩. ಹೆಣ್ಣು ಎಷ್ಟೇ ವಿದ್ಯಾವಂತಳಾದರು, ಅವಳು ಎಷ್ಟೇ ಆಧುನಿಕತೆಯನ್ನು ಮೈಗೂಡಿಸಿಕೊಂಡರು,  ಭಾರತವೇ ಆಗಲೀ ಅಥವಾ ಪಾಶ್ಚಿಮಾತ್ಯ ದೇಶಗಳೇ ಆಗಲಿ, ಹೆಣ್ಣು ಎಂದಿಗೂ ಗಂಡಿನಂತೆ ಇರಲು ಸಾಧ್ಯವಿಲ್ಲ. ಅಂದರೆ ಹೆಣ್ಣಿಗೆ ಅವಳದೇ ಆದ ಭಾವನೆಗಳು, ಸೂಕ್ಷ್ಮಗಳು ಇರುತ್ತವೆ.  ಇದರಲ್ಲಿ ಬಳಸಿದ ಪದದಂತೆ, ದೇಹಭಾದೆಯನ್ನು ತೀರಿಸಿಕೊಳ್ಳುವ ಸಲುವಾಗಿ ಹೆಣ್ಣು ಏಷ್ಟೇ ಗಂಡಸರ ಸಂಗಮಾಡಿದರೂ, ಹೆಣ್ಣಿಗೆ ಹೆಣ್ಣುತನ ಎಂಬುದು ಯಾವಗಲೂ ಇರುತ್ತದೆ.  ಇತರದೇಶಗಳಲ್ಲಿ ಕಾಮವು ಮುಕ್ತವಾಗಿದೆ, ನಾವೂ ಯಾಕೇ ಕಾಮವನ್ನು ಮುಕ್ತವಾಗಿ ಮಾಡಬಾರದು ಎಂದು ಇಲ್ಲಿನ ಸ್ತ್ರೀಯರ ಮೊಂಡುವಾದಕ್ಕೆ ಅರ್ಥವೇ ಇಲ್ಲ... ನಾನು ಮೊದಲೇ ಹೇಳಿದಂತೆ ಹೆಣ್ಣಿಗೆ ಅವಳದೇ ಅದಂತಹ ಕೆಲವು ಸೂಕ್ಷ್ಮಗಳಿರುತ್ತವೆ, ಕೊನೆಗೆ ಅವಳಿಗೆ ನಾನು ಒಂಟಿ ಎಂಬ ಭಾವನೆ ಬರಲು ಶುರುವಿಡುತ್ತದೆ.  ನನ್ನ ದೇಹದ ಸೌಂದರ್ಯ, ಕಸುವು ಮುಗಿದ ಮೇಲೆ ಮುಂದೇನು ನಾನು ಎಲ್ಲರಿಂದಲೂ ದೂರವಾಗುತ್ತೇನೆ ಎಂಬ ಸತ್ಯ ಅರಿವಾಗುತ್ತದೆ.

ಇಲ್ಲಿ ಬರುವ ಮಂಗಳೆ ಎಂಬ ಪಾತ್ರದ ಮೂಲಕ ನಮಗೆ ತಿಳಿಯುತ್ತದೆ. ಅವಳು ಮನಸ್ಸಿನಲ್ಲಿ ಇನ್ನೊಮ್ಮೆ ತಾಯಿಯಾಗುವ ತಾಯ್ತನವನ್ನು ಅನುಭವಿಸುವ ಆಸೆಯಾಗುತ್ತದೆ. ಆದೆರೆ ಹೇಗೆ ಎಂಬ ಸತ್ಯ ಅರಿವಾಗಿ ಸುಮ್ಮನಾಗುತ್ತಾಳೆ.

ಇಲ್ಲಿ ಬರುವ ಒಂದು ಕಾಲೇಜ್ ರೀಡರ್ ಪಾತ್ರವು ಹೆಣ್ಣು ಎಷ್ಟೇ, ವಿದ್ಯಾವಂತಳಾದರೂ, ಬುದ್ಧಿ ಜೀವಿಗಳಂತೆ ವರ್ತಿಸಿದರೂ, ಏಷ್ಟೇ ಹಠಮಾಡಿದರೂ, ಕೊನೆಗೆ ಅವಳಿಗೂ ಒಂದು ಗಂಡಿನ ಪೂರ್ಣಪ್ರಮಾಣದ ಸಹಕಾರ ಬೇಕೆನ್ನಿಸುತ್ತದೆ. ಅದೇ ಸಹಕಾರವನ್ನು ಅವಳು ತನ್ನ ಗಂಡನಲ್ಲಿ ಇದ್ದಿದ್ದರೆ  ಅವಳೀಗೆ ಒಳಿತಾಗುತ್ತಿತು.

ನನ್ನ ಪ್ರಕಾರ, ಹೆಣ್ಣಿಗೆ ವಿದ್ಯಾಭ್ಯಾಸ ಸ್ವಾವಲಂಬನೆ ಎಲ್ಲವೂ ಬೇಕು, ಆದರೆ ಒಂದು ಹೆಣ್ಣಿಗೆ ಯಾವುದೇ ಸಂಧರ್ಬದಲ್ಲಿ ಒಂದು ಗಂಡಿನ ಆಸರೆ ಬೇಕೆಬೇಕು. ಮುಂದೆ ಏಷ್ಟೇ ಅಹಂ ತೋರಿಸಿದರು ಒಳೊಗೊಳಗೆ ನೋವು ಇದ್ದೇ ಇರುತ್ತದೆ. ಇದಕ್ಕೆ ಮುಖ್ಯಕಾರಣ ಹೆಣ್ಣು ವಿದ್ಯಾವಂತಳಾದರೂ, ಅವಳ ಮನಸ್ಸು ದೇಹ ಇನ್ನೂ ಹೆಣ್ಣಿನದೆ ಅವಳು ಮಾನಸಿಕವಾಗಿ ಸಬಲೆಯಾಗಿಲ್ಲ.  ವಿದ್ಯೆ ಎಂದರೆ, ಸಾಮಾಜದಲ್ಲಿ ಗಂಡನನ್ನೂ ಎದುರುಹಾಕಿಕೊಂಡು ನಮಗೆ ಗಂಡನಿಂದ ಏನೂ ಆಗಬೇಕಾಗಿಲ್ಲ ನಾವು ಸಬಲೇ ಎಂರ್ಥ ಅಲ್ಲ.

೫. ಹೆಣ್ಣು ಎಷ್ಟೇ ವಿದ್ಯಾವಂತೆ ಆಧುನಿಕ ಮಹಿಳೆ ಎಂದು ಹೇಳಿ ತಪ್ಪುದಾರಿ ಹಿಡಿದರೆ ಅವಳೇ ಮುಂದೆ ಅದರ ಕೆಟ್ಟಫಲವನ್ನು ಅನುಭವಿಸಬೇಕಾಗುತ್ತದೆ. ಹೆಣ್ಣಿಗೆ ತನ್ನದೇ ಆದ ಕೆಲವು ನಿಬಂಧನೆಗಳಿವೆ, ಭಾರತೀಯ ನಾರಿಗೆ ತನ್ನದೇ ಆದ ಗೌರವವಿದೆ. ಮನೆಯಲ್ಲಿ ಕಷ್ಟ ಇದೇ ಎಂದು ಮಾಂಸದದಂಧೆ ಮಾಡುವದು ಎಲ್ಲಿಯ ನ್ಯಾಯ. ಹೀಗೆ ಮಾಡಿದಲ್ಲಿ ನಾವೇ ಗಂಡಸಿರಿಗೆ ಮಣೆಹಾಕಿಕೊಟ್ಟ ಹಾಗೇ ಅಗುವದಿಲ್ಲವೇ.  ನಾವೇ ಸಮಾಜವನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡಿದ ಹಾಗೆ ಅಲ್ಲವೇ.

೬. ಒಂದು ಅಂಶವೆಂದರೆ, ಹೆಣ್ಣು ಒಬ್ಬ ಗಂಡಸಿನ ಬಾಳಿನಲ್ಲಿ ಎಷ್ಟು ಮುಖ್ಯ, ಮತ್ತು ಒಂದು ನಿಜವಾದ ಹೆಣ್ಣು ಗಂಡಿನ ಯಶಸ್ಸಿನಲ್ಲಿ ಹೇಗೆ ಭಾಗಿಯಾಗಿರುತ್ತಾಳೆ ಎಂದು ವೈಜಯಂತಿ ಎಂಬ ಪಾತ್ರದ ಮೂಲಕ ತಿಳಿಸಿದ್ದಾರೆ.  ಹಾಗೇ ಹೆಣ್ಣು ತನ್ನ ಸೀಮಿತದಲ್ಲಿ ಇದ್ದಲ್ಲಿ ಸಂಸಾರ ಹೇಗೆ ಸುಂದರವಾಗಿರುತ್ತದೆ, ಮತ್ತು ಗಂಡಸಿಗೆ ಎಲ್ಲಿಯೂ ತಪ್ಪು ಮಾಡುವ ಅವಕಾಶವನ್ನು ಅಥವಾ ಆಲೋಚನೆಯೇ ಬರದಂತೆ ಹೇಗೆ ಸಂಸಾರವನ್ನು ಸರಿದೂಗಿಸಿಕೊಂಡು ಹೋಗಬಹುದು ಎಂದು ಇಲ್ಲಿ ತಿಳಿಯಬಹುದಾಗಿದೆ.

೭. ಸಮಾಜಸೇವಕರು ಎಂದು ಹೇಳಿಕೊಳ್ಳುವ ರಾಜಕಾರಣಿಗಳ ಲಂಪಟ ಹಾಗೂ ಅವರ ಮುಂದೆ ಕುರಿಗಳಂತೆ ಆಡುವ ಬುದ್ಧಿ ಜೀವಿ ಸ್ತ್ರೀಯರು, ಅವರ ಪ್ರಾಭಾವದ ಮುಂದೆ ನನ್ನದೇನು ನಡೆಯೊಲ್ಲ ಎಂಬ ಬೇಸರ ಸಂಕಟ. ಅದಕ್ಕೋಸ್ಕರ ಎತ್ತಿಗೆ ಜ್ವರ ಬಂದರೆ ಕೋಣನಿಗೆ ಬರೆ ಎಂಬಂತೆ, ತಮ್ಮ ಗಂಡಂದಿರ ಮೇಲೆ ಸಿಟ್ಟು ತೀರಿಸಿಕೊಳ್ಳುವ ಪರಿ. ಅಂದರೇ, ಇಲ್ಲಿ ಹೆಣ್ಣು ಎಷ್ಟೇ ವಿದ್ಯಾವಂತಳಾದರೂ ಮಾನಸಿಕವಾಗಿ ಅಬಲೆ...

೮. ಈಗಿನ ಸಾಮಾಜವನ್ನು ಯುವಜನತೆ ಹೇಗೆ ಸರಿಪಡಿಸಬೇಕು ಎಂಬ ಸೂಕ್ಷ್ಮ, ತಾಯಿ ಏಷ್ಟೇ ವಿದ್ಯಾವಂತಳಾಗಿದ್ದರೂ, ಅವಳು ನಡೆಯುವ ದಾರಿಯು ಸರಿಯಾಗಿಲ್ಲ,  ನಾವು ಇದರಿಂದ ದೂರ ಇರಬೇಕು ಎಂಬ ಸೂಕ್ಶ್ಮವನ್ನು ಇಳಾ ಅವರ ಮಗಳ ಪಾತ್ರದಲ್ಲಿ ತೋರಿಸಿದ್ದಾರೆ. ಮತ್ತು ಸಮಾಜದಲ್ಲಿ ಇನ್ನೂ ಭಾತೃತ್ವ, ಕುಟುಂಬ ಸಂಸಾರ, ಹೊಂದಾಣಿಕೆ, ಎಂಬ ಪದಗಳು ಇನ್ನೂ ಇವೇ ಅವು ಅರ್ಥಕಳಕೊಳ್ಳಲಿಲ್ಲ ಎಂಬುದನ್ನು ತೋರಿಸಿದ್ದಾರೆ. ಹಿರಿಯರು ಇಂದಿನ ಪೀಳಿಗೆಯವರಿಗೆ ಯಾಕೆ ಬೇಕು ಅವರ ಅನುಭವ ಎಷ್ಟು ಮುಖ್ಯ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

೯. ಪುಟ್ಟಕ್ಕ ಎಂಬ ಪಾತ್ರದಮೂಲಕ ಹೆಣ್ಣನ್ನು ಹೀಗಳೆಯ ಬೇಡಿ, ಅವರಿಗೂ ಪ್ರೀತಿಯನ್ನು ನೀಡಿ ಎಂಬ ಸಂದೇಶವಿದೆ.

೧೧. ವರದಕ್ಷಿಣೆಯ ಬಗ್ಗೆ ಅವರು ಹೇಳುವ ಒಂದು ಮಾತು ತುಂಬಾ ಚೆನ್ನಾಗಿದೆ... "ವರದಕ್ಷಿಣೆ ತೆಗೆದುಕೊಳ್ಳುವುದು ತಪ್ಪಾದರೆ, ಕೆಲಸದಲ್ಲಿರುವ ಹೆಣ್ಣೇ ಬೇಕು" ಎಂಬುದು ಎಷ್ಟು ಉಚಿತ....

೧೦. ಇದರಲ್ಲಿ ಬರುವ ಎಲ್ಲ ಪಾತ್ರಗಳು ಒಂದು ಒಳ್ಳೆಯ ಸಂದೇಶವನು ನೀಡುತ್ತವೆ.  ಹಾಗೇ, ಹಳ್ಳಿ ಜೀವನ ಮತ್ತು ಹಳ್ಳಿಗಳ್ಳನ್ನು ಉಳಿಸಿ ಅವೇ ನಮ್ಮ ಜೀವಾಳ ಎಂಬ ಸೂಕ್ಶ್ಮ ಸತ್ಯವನ್ನು ಹೇಳಿದ್ದಾರೆ.

ಉಪಸಂಹಾರ....
ಇಲ್ಲಿ ನಾನು ತಿಳಿದುಕೊಂಡಿದ್ದರಲ್ಲಿ ಏನಾದರೂ ಆಭಾಸವಾಗಿದ್ದರೆ ಅದನ್ನು ಕ್ಷಮಿಸಿ, ಅದು ಸರಿ ಅಲ್ಲ ಇದು ಸರಿ ಎಂದು ಹೇಳುವ ಹಕ್ಕು ನಿಮಗಿದೆ. ಅದರಿಂದ ನಾನು ತಿದ್ದಿಕೊಳ್ಳುವಂತಾಗುತ್ತದೆ.

ಇನ್ನಾದರೂ, ನಮ್ಮ ಯುವಜನಾಂಗವು ಸುಂದರ ಸ್ವಾಥ್ಯವಾದ ಸಮಾಜವನ್ನು ಕಟ್ಟಲು ಈ ಮೂಲಕವಾದರು ಮುಂದಾಗಬೇಕು ಎಂಬುದು ಅವರ ಕನಸಾಗಿರಬಹುದು, ನಾವು ಅದನ್ನು ನನಸಾಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಬಹುದಲ್ಲವೇ...

ವಿದ್ಯೆಗೆ ವಿನಯವೇ ಭೂಷಣ, ಯುವಜನಾಂಗವು ಕೆಲವು ಬುದ್ಧಿಜೀವಿಗಳ ಹೋರಾಟ ಮೇಲ್ಮೈಯನ್ನು ಅಷ್ಟೇ ನೋಡದೆ ಅದರ ನಿಜವಾದ ಒಳ ಅರ್ಥವನ್ನು ಅರಿತು ಅವರಿಗೆ ಸಹಕರಿಸುವುದು ಒಳಿತು.

ಹೆಣ್ಣೊಂದು ಕಲಿತರೇ ಶಾಲೆಯೊಂದು ಕಲಿತಂತೆ, ಎಂಬ ಗಾದೆ ಇದೆ, ಹೆಣ್ಣು ಏಷ್ಟೇ ಮುಂದುವರಿದರೂ ಅವಳು ತನ್ನ ಹೆಣ್ಣು ತನವನ್ನು ಬಿಟ್ಟುಕೊಡಬಾರದು.  ಈಗ ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಬರಬಹುದು ಹಾಗಾದರೇ ಗಂಡು ಏನೇ ಮಾಡಿದರೂ ಅದು ಸರಿಯೇ, ಇಲ್ಲ ಖಂಡಿತ ತಪ್ಪು ಮಾಡಿದವರಿಗೆ ಶಿಕ್ಷೇ ಆಗಲೇ ಬೇಕು ಅದಕ್ಕೆ ಯಾರು ಹೊರತಾಗಿಲ್ಲ.  ಅದಕ್ಕೆ ಸ್ತ್ರೀಯರು ಮನಬಂದಂತೆ ವರ್ತಿಸಿ ಸಮಾಜದ ಆರೋಗ್ಯವನ್ನು ಹಾಳುಗೆಡವುವ ಅವಕಾಶವನ್ನು ಏಕೇ ಮಾಡಬೇಕು ಎಂಬುದು ನನ್ನ ಪ್ರಶ್ನೆ, ನಾವು ಹೆಣ್ಣನ್ನು ದೇವರೆಂದು ಪೂಜಿಸುತ್ತೇವೆ, ಆದರೆ ಯಾವುದೇ ದೇವತೆಯು ಸಾಮಾಜದ ಸ್ವಾಥ್ಯವನ್ನು ಹಾಳುಮಾಡುವ ಕೆಲಸವನ್ನು ಮಾಡಿದ ಯಾವುದೇ ಉದಾಹರಣೆ ನಮಗೆ ಎಲ್ಲೂ ಸಿಗುವುದಿಲ್ಲ... ತೀರಾ ಇತ್ತೀಚಿನವರಾದ ಶಾರಾದದೇವಿಯವರು ಸ್ತ್ರೀ ಕುಲಕ್ಕೆ ಒಂದು ಮಾದರಿ.  ಹಾಗೆಂದು ಸ್ತ್ರೀಯರು ಪುರುಷರದಬ್ಬಾಳಿಕೆಯನ್ನು ಸಹಿಸಿ ಎಂದು ನಾನೂ ಹೇಳುತ್ತಿಲ್ಲ ಅದಕ್ಕೇ ನಿವೇ ಅವಕಾಶ ಕೊಡಬೇಡಿ ಎಂಬುದು ನನ್ನ ಮಾತಿನ ಅರ್ಥ. ಎನಂತೀರಿ......

Sunday, August 22, 2010

ಆಶಾಢ ವೈಭವ....

ನಾನು ಈ ಸಂಚಿಕೆಯಲ್ಲಿ ಹಿಂದಿನ ಸಂಚಿಕೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದೆ.  ಆದರೆ ಈ ಸಂಚಿಕೆಯಲ್ಲಿ ಅದನ್ನು ಮುಂದುವರಿಸಲಾಗಲಿಲ್ಲ ಕ್ಷಮೆ ಇರಲಿ. ನಮ್ಮ ನಾಡಿನ ಹಿರಿಯ ಕವಿಯೊಬ್ಬರು ಹೇಳಿದಂತೆ... "ಶ್ರಾವಣ ಬಂತು ಶ್ರಾವಣಾ ಕಾಡಿಗೆ ಬಂತು ನಾಡಿಗೆ....." ಹಿಂದೂ ಸಂಪ್ರದಾಯದ ಪ್ರಕಾರ ಇನು ಸಾಲು ಸಾಲು  ಹಬ್ಬಗಳು ... ನಾವು ಈಗಾಲೇ ೨ ಹಬ್ಬಗಳನ್ನು ಆಚರಿಸಿದ್ದು ಆಯಿತು. 

ನಾನು ಈಗಾಲೇ ಬರೆಯ ಬೇಕಾದ ವಿಷಯದ ಸ್ವಲ್ಪ ವಿಳಂಬವಾಗಿ ಇದನ್ನು ಬರೆದೆನೆಂದು ನನಗೆ ಅನಿಸುತ್ತಿದೆ ಯಾಕೆಂದರೆ ನಾವು ಈಗಾಗಲೇ ಶ್ರಾವಣ ಮಾಸದ ಮಧ್ಯಭಾಗದಲ್ಲಿದ್ದೇವೆ.  ಈಗ ನಾನು ಬರೆಯ ಬೇಕಾದ ವಿಷಯಕ್ಕೆ ಬರುತ್ತೇನೆ ನನಗೆ "ಆಷಾಢದ" ಮಾಸದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ, (ಅಂದರೆ ಅಂತಹ ಸಂರ್ಧಭ ಇನ್ನೂ ನನಗೆ ಬಂದಿಲ್ಲದ ಕಾರಣ) ನನಗೆ ಈ ಮಾಸ(ತಿಂಗಳು) ಎಲ್ಲಾ ತಿಂಗಳುಗಳಂತೆ. ಆದರೆ, ಇಂದಿನ ದಿನಗಳಲ್ಲಿ ಈ ಪತ್ರಿಕಾ ಮಾಧ್ಯಮ ಮತ್ತು ಟಿ.ವಿ ಮಾಧ್ಯಮಗಳಿಂದಾಗಿ ಆಷಾಢವು ಸ್ವಲ್ಪ ಹೆಚ್ಚು ಪ್ರಚಾರದಲ್ಲಿದೆ, ಈ (ಆಷಾಢ) ತಿಂಗಳನ್ನು ನವದಂಪತಿಗಳ ಪಾಲಿಕೆ ವಿಲನ್ ಎಂಬಂತೆ ಬಿಂಬಿಸುತ್ತಿದೆ.  ಆಷಾಢ ಮಾಸದಲ್ಲಿ ನವದಂಪತಿಗಳು ಒಟ್ಟಿಗೆ ಇರಬಾರದು, ವಧುವು ಅವಳ ತವರಿಗೆ ಹೋಗುವ ಸಂಪ್ರದಾಯದ ಬಗ್ಗೆ ಕೇಳಿ ಗೊತ್ತೇ ವಿನಃ ಸ್ವಾನುಭವವಿಲ್ಲ. ಅದೇನೇ ಆದರೂ ಆಷಾಢವು ನವದಂಪತಿಗಳ ಪಾಲಿಗೆ ಘೋರ ನರಕವಂತೆ.

ನಾನು ದಿನಾಲು ಆಫೀಸಿಗೆ ಬಸ್ಸಿನಲ್ಲಿಯೇ ಹೋಗುವುದು, ಅದಕ್ಕೆ ಕಾರಣ ನನ್ನ ಮನೆಯಿಂದ ಆಫೀಸು ಹತ್ತಿರ. ಆದರೆ ನಾನು ಬಸ್ಸಿನಲ್ಲಿ ಪ್ರಯಾಣಿಸುವಾಗ ಸಾಮಾನ್ಯವಾಗಿ ಪುಸ್ತಕವನ್ನು ಓದುವ ಅಭ್ಯಾಸ. ತೀರಾ ಕೆಲ ಅನಿವಾರ್ಯ ಸಂಧರ್ಬದಲ್ಲಿ ಮಾತ್ರ ಮೊಬೈಲಿನಲ್ಲಿ ಎಫ್ ಎಂ. ಆಲಿಸುತ್ತೇನೆ.

ಕೆಳೆದ ತಿಂಗಳು ಅದೊಂದು ದಿನ ನಾನು ಎಂದಿನಂತೆ ಪ್ರಯಾಣಿಸುವವೇಳೆ ಪುಸ್ತಕವನ್ನು ಹೊರತೆಗೆದು ಓದಲು ಪ್ರಾರಂಭಿಸಬೇಕು, ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳ ಗುಂಪೊಂದು ತುಂಬಾ ದೊಡ್ಡ ಧ್ವನಿಯಲ್ಲಿ ರೋಡಿಯೋವನ್ನು ಹಾಕಿ ಬೇರೆಯವರಿಗೆ ತೊಂದರೆ, ಕಿರಿಕಿರಿಯನ್ನು ಮಾಡಿ ನನ್ನ ಓದಿಗೆ ಪೂರ್ಣವಿರಾಮವಿತ್ತರು, ಅವರಿಗೆ ಗದರಿ ಬುದ್ಧಿ ಹೇಳೋಣವೆಂದರೆ ಅವರ ಸಂಖ್ಯೆಯು ತುಂಬಾ ಇತ್ತು.  ಇದು ಆಗುವ ಕೆಲಸವಲ್ಲ ಎಂದು ಅರಿತು ಸುಮ್ಮನಾಗಿ ಪುಸ್ತಕವನ್ನು ಬ್ಯಾಗಿನಲ್ಲಿ ಸೇರಿಸಿ, ನಾನೂ ಸಹ ನನ್ನ ಮೊಬೈಲಿನಲ್ಲಿ ಎಫ್.ಎಂ ಹಾಡುಗಳನ್ನು ಕೇಳಿ ಆನಂದಿಸುತ್ತಿದೆ.  ಅದೇ ಸಂಧರ್ಭದಲ್ಲಿ "ವೀರಮದಕರಿ" ಚಿತ್ರದ "ಜುಂ ಜುಂ ಮಾಯ ಹಾಡು ಪ್ರಸಾರವಾಗುತ್ತಿತ್ತು" ಸಾಮಾನ್ಯವಾಗಿ ನಾನು ಹಾಡುಗಳನ್ನು ಕೇಳುವಾಗ ಮೊದಲು ಅದರ ಸಾಹಿತ್ಯವನ್ನು ತಿಳಿದು, ಆಮೇಲೆ ಸಂಗೀತ ಮೊದಲಾದುವುಗಳನ್ನು ಎನ್ಜಾಯ್ ಮಾಡುತ್ತೇನೆ. ಅದೇಕೋ ಈ ಹಾಡಿನ ಸಾಲುಗಳು ತುಂಬಾ ಇಷ್ಟವಾದವು. ಆಫೀಸಿಗೆ ಹೋದನಂತರ ಅದನ್ನು ಆನ್ ಲೈನಿನಿಂದ ಡೌನ್ ಲೋಡ್, ಮಾಡಿ ಪದೇ ಪದೇ ಕೇಳಿದೆ. ನನ್ನ ಸಹದ್ಯೋಗಿಯೊಬ್ಬರ ನೆರವಿನಿಂದ ಅದರ ಸಾಹಿತ್ಯವನ್ನು ಸಹಾ ಡೌನ ಲೋಡ್ ಮಾಡಿಕೊಂಡೆ.  ಆಗ ನನಗೆ ಎನೋ ಹೊಳೆದವನಂತೆ, ಇದೇ ರೀತಿ ಇರಬೇಕು ಆಷಾಡದ ನವದಂಪತಿಗಳ ವೇದನೆ ಎಂದಿನಿಸುತು. ಈ ಸಾಲುಗಳು ಹೀಗಿವೆ..

ಕುಂತಲ್ಲಿ ಕೂರೊಂಗಿಲ್ಲ, ನಿಂತಲ್ಲಿ ನಿಲ್ಲೊಂಗಿಲ್ಲ
ಏನೇನೋ ಆಗ್ತೈತಲ್ಲ, ಹೇಳೊಕೆ ಮಾತೆ ಇಲ್ಲ
ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಏನಿದು ಮಾಯ
ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಏನಿದು ಮಾಯ

ನೆಟ್ಟಗೆ ನಿದ್ದೆ ಇಲ್ಲ, ಹೊಟ್ಟೆಗೆ ಹಸಿವೆ ಇಲ್ಲ
ಘಂಟೆಗೆ ಲೆಕ್ಕ ಇಲ್ಲ, ಡ್ಯುಟಿಗೆ ಹೋಗ್ತಾ ಇಲ್ಲ
ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಹೃದಯ ಗಾಯ
ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಹೃದಯ ಗಾಯ

ಯವ್ವಿ ಯವ್ವಿ ಯವ್ವಿ ಯವ್ವಿ ಯಾ
ಯವ್ವಿ ಯವ್ವಿ ಯವ್ವಿ ಯವ್ವಿ ಯಾ

ಏನಾರ ಮಾತಾಡೊ ಓ ಮಹರಾಯ
ಈಗ್ಯಾಕೆ ಹರಿಕತೆ ಬೇಡಮ್ಮಯ್ಯ
ಕಣ್ಣಾ ಮುಚ್ಚೆ ಆಟನಾರು ಆಡೊಣಯ್ಯ
ಉಪ್ಪು ಮೂಟೆಗಾದ್ರೆ ಈಗ ನಾನು ಸೈಯ್ಯ
ಮೈಗೆ ಮೈಯ ತಾಗೂದು ಕಷ್ಟನಯ್ಯ
ಅದುವೆ ನನ್ನ ಇಷ್ಟನೆ ಓ ಅಮ್ಮಯ್ಯ
ಅಬ್ಬಬ್ಬ ಈ ಹುಡುಗ ತುಂಬಾನೆ ತುಂಟನೊ
ಹಿಡಿಯೋದು ಹೇಗಿವನನ್ನ

ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಹೃದಯ ಗಾಯ
ಐ ಕಾನ್ ಸೀ ನತ್ತಿಂಗ್ ನತ್ತಿಂಗ್, ಐ ಕಾನ್ ಹಿಯರ್ ನತ್ತಿಂಗ್ ನತ್ತಿಂಗ್
ಐ ಕಾನ್ ಫೀಲ್ ನತ್ತಿಂಗ್ ನತ್ತಿಂಗ್, ಐ ಕಾನ್ ಡೊ ನೋವೇರ್ ನೊವೇರ್
ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಹೃದಯ ಗಾಯ

ಸರಸರ ಸರಸರ ಬಾ ಸರಸಕ್ಕೆ
ಅವಸರ ಕಾರಣ ಅಪಘಾತಕ್ಕೆ
ನನ್ನ ಮೇಲೆ ಯಾಕೆ ಇಲ್ಲ ನಂಬಿಕೆ ನಿಂಗೆ
ಅನ್ಮಾನ ನಿನ್ನಿಗಿಂತ ನನ್ ಮೇಲ್ ನಂಗೆ
ಹಸಿದಾಗ ಸಿಕ್ಕರೆ ಬೆಲೆ ಊಟಕ್ಕೆ
ಸದ್ಯಕ್ಕೆ ಸಕ್ಕರೆ ಮುತ್ತಿದು ಸಾಕೆ
ಮುತ್ತಿಂದ ಮೊದಲಾಗಿ ನಾ ಮುಂದುವರಿದರೆ
ತಡಿಬೇಡ ನನ್ನನು ನೀನು

ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಹೃದಯ ಗಾಯ
ತಿರುಪತಿ ವೆಂಕ್ರಮಣ ಸ್ವಾಮಿ
ಬೇಲೂರ ಚೆನ್ಕೇಶ ಸ್ವಾಮಿ
ಧರ್ಮಸ್ಥಳ ಮಂಜುನಾಥ್ ಸ್ವಾಮಿ
ನನ್ ಗತಿ ಯೆನು ಸ್ವಾಮಿ
ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಹೃದಯ ಗಾಯ
ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಹೃದಯ ಗಾಯ

ಹುಡುಗ-ಹುಡುಗಿ ಪ್ರಾಯಕ್ಕೆ ಬಂದ ಮೇಲೆ, ಮನೆಯವರು ಅವರಿಗೆ ಒಂದು ಒಳ್ಳೆ ಸಂಬಂಧವನ್ನು ನೋಡಿ ಮದುವೆ ಮಾಡಿಕೊಟ್ಟು ತಮ್ಮ ಜವಾಬ್ದಾರಿಯನ್ನು ಪೂರೈಸಿಕೊಳ್ಳುತ್ತಾರೆ. ಆದರೆ ಮದುವೆಯಾದ ನವಜೋಡಿಗಳ ಜೀವನದಲ್ಲಿ ಬರುವ ಈ ಆಷಾಢವು... ಅವರನ್ನು ಬೇರೆಮಾಡುತ್ತದೆ, ಈ ಸಂಧರ್ಭದಲ್ಲಿ ಈ ಹಾಡು ತುಂಬಾ ಸರಿಯಾಗಿ ಅವರಿಗೆ ಹೊಲುತ್ತದೆ ಎಂದೆನಿಸಿತು.

ಪಾಪ ಆ ದಂಪತಿಗಳಿಗೆ, ಅವಳಿಗೆ ಅವನ, ಅವನಿಗೆ ಅವಳ ನೆನಪಲ್ಲಿ "ನೆಟ್ಟಗೆ ನಿದ್ದೆ ಇಲ್ಲ, ಹೊಟ್ಟೆಗೆ ಹಸಿವೆ ಇಲ್ಲ, ಘಂಟೆಗೆ ಲೆಕ್ಕ ಇಲ್ಲ, ಡ್ಯುಟಿಗೆ ಸರಿಯಾಗಿ  ಹೋಗ್ತಾ ಇಲ್ಲ (ಆಫೀಸಿನವರಿಗೂ ತೊಂದರೆ)... ಆದರೆ ಈಗಿನ ಕಾಲದಲ್ಲಿ ಒಂದು ಅನುಕೂಲವೆಂದರೆ, ಇದು ಮೊಬೈಲ್ ಯುಗ ಆಗಿರುವದರಿಂದ ಕಷ್ಟ-ಸುಖ ಫೋನಿನ ಮುಖಾಂತರ ಹಂಚಿಕೊಳ್ಳ ಬಹುದು... ನೀವು ಈ ಹಾಡಿನ ಪ್ರತಿಯೊಂದು ಸಾಲನ್ನು ಆ ನವದಂಪತಿಗಳಿಗೆ ಹೋಲಿಸಿ ನಿಮ್ಮದೇ ಆದ ರೀತಿಯಲ್ಲಿ ಆನಂದಿಸಿ.... ಏಕೆಂದರೆ ನಾನು ತೀರಾ ವಿವರವಾಗಿ ಬರೆಯ ಹೋದರೆ ಪುಟಗಟ್ಟಲೆ ಆಗಬಹುದು.... ಆದ್ದರಿಂದ ನೀವೇ ಪ್ರಯತ್ನಿಸಿ.... ನೀವೂ ಅವರ ವಿರಹವನ್ನು ಅನುಭವಿಸಿ....

Sunday, August 15, 2010

ಮಂಜು.... "ಮತ್ತೆ..., ವಿಶೇಷ????"


"ನೀವು ದಮ್ ಹೊಡಿತೀರಾ????, ಎಣ್ಣೆ???", "ನಾನು ಹೊನ್ನಾವರದವನು, ಮೈಸೂರಲ್ಲಿ ಇದ್ದೆ ನೀವು ಬರೊ ಒಂದು ವಾರ ಮುಂಚೆ join ಆದೆ ಕಣ್ರೀ...", "ಅದೇನೋ, ಎಲ್ಲರಿಗೂ ಹನುಮಂತನಗರ ಗೊತ್ತಿರುತ್ತೆ ಆದರೆ ಶ್ರೀನಿವಾಸನಗರ ಗೊತ್ತಿರೋದಿಲ್ಲ","ಮತ್ತೆ ವಿಶೇಷ??" ಹೀಗೆ ಸಾಸಿವೆ ಚಿಟಾಯಿಸಿದ ಹಾಗೆ ಮಾತುಗಳು, ಆಗಾಗ ’ಎದ್ದೇಳು ಮಂಜುನಾಥ’ movie dialogue...ಮೊದಲಿನ ದಿನದ ಪರಿಚಯದಲ್ಲಿ ನಮ್ಮ "ಉದ್ದು ಮುಖದ ಮುದ್ದು ಹುಡುಗ" ಮಂಜು, ಬರೋಬ್ಬರಿ ಮಿಂಚಿದ್ದರು... ಆ size 0, ಅಲ್ಲ -2 ಶರೀರ, 5 ಮುಕ್ಕಾಲು ಅಡಿ ಎತ್ತರದಲ್ಲಿ 2 ಮುಕ್ಕಾಲು ಅಡಿ ಮುಖಾರವಿಂದವೇ ಆವರಿಸಿದಂತಿತ್ತು!!!. ಆಗಾಗ ಅದಕ್ಕೆ "ಮೇಕೆ ಗಡ್ಡ"ವೂ ಸೇರಿ ಅದು ಮತ್ತಷ್ಟು ವಿಚಿತ್ರವಾಗಿ ಕಂಡದ್ದೂ ಇದೆ....

ಶ್ರೀನಿವಾಸನಗರದ ಮೂಲೆಯ ಒಂದು ಬಾಡಿಗೆ ರೂಮ್ನಲ್ಲಿದ್ದ ಅವನಿಗೆ, PG ಬದುಕಿನಿಂದ ಬೋರಾಗಿದ್ದ "ಮಾಂತ್ಯ", ತನ್ನ PG ಬದಲಿಸುವ ವಿಚಾರ ತಿಳಿಸಿದ್ದೇ, ಕೂಡಿ ಸಂಸಾರ ಮಾಡುವ ಪ್ರಸ್ತಾವನೆ ತಾನಾಗಿಯೇ ಮುಂದೆ ಬಂದು ಎರಡೇ ದಿನದಲ್ಲಿ ಹೊಸ ಸಂಸರ ಶುರುವಾಗಿಯೇಬಿಟ್ಟಿತ್ತು. 9.30 ಕ್ಕೆ ಮೊದಲು ಬೆಳಕನ್ನು ಕಾಣದ ಮಾಂತ್ಯನನ್ನು 8 ಕ್ಕೆ ನೀರು ಕಾಯಿಸಿ, ಎಬ್ಬಿಸಿ, ತಗೊ ರಾಜಾ........ 8.45 ಕ್ಕೆ ಆಫೀಸ್ಗೆ ಇಬ್ಬರೂ ಹಾಜರ್...

ಎಲ್ಲಾ ಕಥೆಗೊಂದು villain ಇದ್ದಹಾಗೆ ಮಂಜುಗೊಬ್ಬ villain ಇದ್ದ ಕೂಡ. ಅದೇ ಅವನ computer.... ಅದಕ್ಕೆ ನಾವು ಆಗಲೇ ಅವನ "ಹೆಂಡತಿ"ಯೆಂದು ಹೆಸರಿಟ್ಟಾಗಿತ್ತು. ಅದೋ, ಅವನು ಹೇಳುವ ಮಾತೊಂದನ್ನೂ ಕೇಳುತ್ತಿರಲಿಲ್ಲ..., ಈಗೊಂದು task ಕೊಟ್ಟರೆ ಅದು ಇನ್ನರ್ಧಗಂಟೆಗೆ ಅದನ್ನು ಮಾಡಿಯೇ ಬಿಡುತ್ತಿತ್ತು. ಅಷ್ಟರಲ್ಲಿ ನಮ್ಮ ಮಂಜು ಏನು ಸುಮ್ಮನಿರುತ್ತಿದ್ದರೆ??? ಅವರು button ಗಳನ್ನು ಇನ್ನು ಹತ್ತು ಬಾರಿ ಒತ್ತಿದರೆ ಆ computer ಮಾರಾಯ್ತಿ ಅಪ್ಪಟ ಮುನಿಸಿಕೊಂಡ ಹೆಂಡಿರಂತೆ ಮಾತನಾಡದೇ ಕೂರುತ್ತಿತ್ತು... ಹೀಗೆ ನಮ್ಮ ಮಂಜು 2 ನಿಮಿಷಕ್ಕೊಮ್ಮೆ ಹಿಂದಕ್ಕೆ ತಿರುಗಿ "ಆನಂದ್ ಸಾರ್.... ನನ್ನ system ಮತ್ತೆ hang ಆಯ್ತು!" ಎಂದುಸುರುತ್ತಿದ್ದುದು ಸಾಮಾನ್ಯವಾಗಿಬಿಟ್ಟಿತ್ತು.

ಹ್ಯಾಪಿ, ಮಂಜು ಇಬ್ಬರದೂ ಬೇರೆ ಬೇರೆ cubicle ಆಗಿದ್ದರಿಂದ ಯಾವುದೇ Designing issue ಬಂದರೂ ಅಲ್ಲಿಂದಿಲ್ಲಿಗೆ ಬಂದು "ಆನಂದ್ ಸಾರ್, ಇದು ಹೆಂಗೆ ಸಾರ್ ಮಾಡೊದು" ಎಂದರೆ ನಮ್ಮ ಹ್ಯಾಪಿ, ಅರ್ಧ ಮಾಡಿ ತೋರಿಸಿ ಇನ್ನು ನೀವು R&D ಮಾಡ್ರೀ ಎಂದು reply ಕೊಡುತ್ತಿದ್ದರು. ನಮ್ಮ ಮಂಜುನೋ,,, R&D ಅಂದರೆ ಅದೂ ಒಂದು Photoshopನ feature ಎಂದು ಭಾವಿಸಿ ಅದು ಹೀಗೆ ಮಾಡೋದು ಸಾರ್!! ಎಂದು ಕೇಳಿದ್ದೂ ಇದೆ...

ಈಗಾಗಲೆ systemನ ವೈಮನಸ್ಯದಿಂದ ಬಳಲಿದ್ದ ಮಂಜುಗೆ ಒಂದು ದಿನ ಮಹತ್ಕಾರ್ಯವೊಂದು ಬಂದೆರಗಿತ್ತು. ಅದೋ ಶಾಲೆಯೊಂದರ ವಾರ್ಷಿಕೋತ್ಸವದ ಪುಸ್ತಕಕ್ಕ Cover Page ಮಾಡುವ ಸೌಭಾಗ್ಯ..!!! ಅದಕ್ಕೆಂದು ಆರಿಸಿದ್ದ ಚಿತ್ರ ಹೊನ್ನಾವರದ bridge... ಅದೋ, ಸಂಜೆಯ ಹೊತ್ತಿನಲ್ಲಿ ತೆಗೆದ ಚಿತ್ರವಾಗಿತ್ತು. ಪಾಪ ಮಂಜುಗೆ ಸಿಕ್ಕ ಕೆಲಸವೆಂದರೆ ಆ ಸಂಜೆಯ ಹೊತ್ತಿನ bridgeನ ಚಿತ್ರವನ್ನು ಮುಂಜಾನೆಯ ಹೊತ್ತಿನ bridge ಮಾಡುವುದು!!!!
ಈಗಾಗಲೇ ಮುನಿಸಿಕೊಂಡಿದ್ದ computer ಹೆಂಡತಿ, ಎಷ್ಟೇ ಪಟಾಯಿಸಿದರೂ ಒಂದು ಮಾತು ಕೇಳಲೂ ಸಿದ್ಧವಿರಲಿಲ್ಲ. ಕಾಡಿ, ಬೇಡಿ, ಪುಸಲಾಯಿಸಿ, ಒಲಿಸಿಕೊಂಡು ಕೆಲಸ ಮಾಡಿಸಿಕೊಳ್ಳುವಷ್ಟರಲ್ಲಿ ಬರೋಬ್ಬರಿ 2 ದಿನವೇ ಕರಗಿ ಮೂರನೆಯ ದಿನವ ಮುತ್ತಿಕ್ಕುತ್ತಿತ್ತು..!!! ಅಂತೂ, ಇಂತೂ ಮಾಡಿ, ಮುಗಿಸಿ ಸೊರಗಿಹೋಗಿದ್ದ ಮಂಜು.... "ಥೂ ಇವನಜ್ಜಿ!!!, ಇದನ್ನು ಮಾಡೊ ಬದಲು ನಾನು ಹೋಗಿ ಇಷ್ಟರಲ್ಲಿ ಬೆಳಗ್ಗಿನ ಜಾವದ್ದು ಇನ್ನು ಚೆನ್ನಗಿರೊ ಫೊತೊ ತಕ್ಕೊಂಡು ಬರ್ತಿದ್ದೆ" ಎಂದೊಮ್ಮೆ ಉದ್ಘರಿಸಿದ್ದು ಎಲ್ಲರ ನೆನಪಿನಲ್ಲಿ ಹಾಗೇ ಉಳಿದಿದೆ.

ಎಲ್ಲರೂ ಹೊಸ ಕೆಲಸಕ್ಕೆ ಸೇರಿದ ಮೊದಮೊದಲು ಮಂಕಾಗಿದ್ದು, ನಂತರ ಚಿಗುರಿ ಮಿಂಚುವುದು ಸಾಮಾನ್ಯವಾದರೆ, ನಮ್ಮ ಮಂಜು ಮೊದಮೊದಲು ಮಿಂಚಿ ನಿಧಾನವಾಗಿ ಮಂಕಾಗತೊಡಗಿದ್ದರು... ಅದರಲ್ಲಿ ಅವರ system ಹೆಂಡಿರ ಪ್ರತ್ಯಕ್ಷ ಹಾಗೂ personal ಎಂಬ ಪರೋಕ್ಷ ಕಾರಣಗಳು ನಮಗೆ ಎದ್ದು ಕಾಣಿಸತೊಡಗಿದ್ದವು.

ಅಂತೂ ಇಂತೂ ಎಲ್ಲರಿಗೂ ಮಂಜು company ಬಿಡುವ ವಿಷಯ ವಿಶೇಷ ಮೂಲಗಳಿಂದ ತಿಳಿಯತೊಡಗಿತ್ತು, ಕಾರಣಕ್ಕೆ "personal" ಎಂಬ ಬೆರಿಕೆ ಇದ್ದ ಕಾರಣದಿಂದಲೋ ಏನೋ ನಾವುಗಳೂ ಅವರನ್ನು ತಡೆಯುವ ಮನಸ್ಸು ಮಾಡಲಿಲ್ಲವಾದೆವು... ಸಮಯವುರುಳಿತು... ಮಂಜು ಕರಗಿತು...

ಇಂದಿಗೂ ನಾವು ಮಂಜುನನ್ನು miss ಮಾಡಿಕೊಳ್ಳುವುದಿದೆ, ನಮ್ಮ ಹ್ಯಾಪಿ ಆಗಾಗ ಉತ್ಸಾಹದಿಂದ call ಮಾಡಿ "ಮಂಜು, ಹೇಗಿದೆ ರೀ ಹೊಸ company" ಎಂದರೆ ಈ ಕಡೆಯಿಂದ "ಪರವಾಗಿಲ್ಲ ಸಾರ್" ಎಂದೆರಡು ಪದಗಳಲ್ಲಿ ಬಂದೇ ಬಿಡುತ್ತದೆ ಉತ್ತರ. ನನಗೆ ಸಿಕ್ಕಾಗಲೆಲ್ಲಾ "ಮಂಜು, ಮತ್ತೆ ಯಾವಗ join ಆಗ್ತೀರ ನಮ್ companyಗೆ" ಎನ್ನುವುದೇ ಸಾಮಾನ್ಯ...

ವಿಚಿತ್ರವೆಂದರೆ, ಅವನ computer ಹೆಂಡತಿ ಕೂಡ ಬೇರೆ ಯಾರನ್ನೂ ತನ್ನನ್ನು ಮುಟ್ಟುಗೊಡಲೊಲ್ಲದೆ ಹಾಗೇ ಒಂಟಿಯಾಗಿಯೇ ಇದೆ.. May be ಅವನ ವಾಪಸ್ ಬರುವಿಕೆಯನ್ನು ಅದೂ ಕೂಡ ಎದುರುನೋಡುತ್ತಿರಬಹುದು...

Monday, August 9, 2010

ಶೀಘ್ರದಲ್ಲೇ ನಿಮ್ಮ ನೆಚ್ಚಿನ ಚಿತ್ರಮಂದಿರದಲ್ಲಿ! ತಪ್ಪದೇ ನೋಡಿರಿ.....

ಇನ್ನು ಪೋಸ್ಟರ್ ಬಿಡುಗಡೆ ನೆ ಇಷ್ಟೊಂದು ಜನಮನ್ನಣೆ ಸಿಕ್ಕಿದೆ ಅಂದ್ರೆ ನಿಜವಾಗಲು ಈ ಸಿನೆಮಾ ಶೂಟಿಂಗ್ ಶುರು ಮಾಡಲೇ ಬೇಕು. ಆದ್ರೆ ಈ ಸಿನೆಮಾ ನಟರ ಕಾಲ್ ಶೀಟ್ ಪಡೆಯೋದು ಹೇಗೆ ಎಂದು ಸ್ವಲ್ಪ ಟೆನ್ಶನ್ ಆಗಿದೆ.

ಚಿತ್ರ ನಿರ್ದೇಶನ ಮತ್ತು ಛಾಯಾಗ್ರಹಣಕ್ಕೆ ನಮ್ಮ ಮಿಲ್ಟ್ರಿ ಅವರಿಗೆ ಹೇಳಿ ಒಪ್ಪಿಸಿದ್ದಾಗಿದೆ. ಸಂಗೀತ ಮಿಲ್ಟ್ರಿ ಫ್ರೆಂಡ್ "ಕಿಂಗ್" ಎನ್ನುವವರು ಮಾಡಿಕೊಡುತ್ತಾರಂತೆ.

ಈ ಮಂತ್ರವಾದಿ ಅಲಿಯಾಸ್ ನಿತ್ಯಾನಂದ ಸ್ವಾಮಿ ಎಷ್ಟು ಬ್ಯುಸಿ ಅಂತ ನಿಮಗೆಲ್ಲರಿಗೂ ಗೊತ್ತು. ಅವರಿಗೆ ಫಿಲಂ ಫೇರ್ ಅವಾರ್ಡ್ ತಗೊಬೇಕೆಂದು ಆಸೆ!
ಟ್ರೈ ಮಾಡೋಣ ಅಂತಿದಾರೆ.

ಇನ್ನು ನಟ ಭಯಂಕರ ನಮ್ಮ ವಿಲನ್.
ಸಾರ್! ಒಂದು ಸಿನೆಮಾ ತೆಗೆಯೋಣ ಸಾರ್ ಅಂದ್ರೆ ಒಂದು ಏಕೆ ಹತ್ತು ತೆಗೆಯೋಣ ಬಿಡ್ರಿ. ಯಾಕೆ ಯೋಚೆನೆ ಮಾಡ್ತಿರ ಅಂತ ಹೇಳಿದಾಗ ನಮಗೆ ಎಲ್ಲಿಲ್ಲದ ಸಂತೋಷ. ( ಅವರಿಗೆ ಇನ್ನು ವಿಲನ್ ಪಾತ್ರ ಅಂತ ಹೇಳೇ ಇಲ್ಲ. ಇನ್ನು ಹಿರೋ ಅಂತ ತಿಳ್ಕೊಂಡಿದಾರೆ. ದಯವಿಟ್ಟು ಸದ್ಯ ನೀವು ಹೇಳಬೇಡಿ.)

ಈ ಹಿರೋದೇ ಸಮಸ್ಯೆ. ತುಂಬಾ ಕಾಮಟೆಶೇನ್. "ಲವರ್ ಬಾಯ್" ಎಂಬ ಖ್ಯಾತಿ ಬೇರೆ. ಇವರಿಲ್ಲದೆ ಹುಡುಗಿಯರು ಸಿನೆಮಾನೇ ನೋಡೋಲ್ಲ ಅಂತಾರೆ! ಅದಕ್ಕೆ ಅವರನ್ನು ಒಪ್ಪಿಸುವಂತೆ ನಿತ್ಯಾನಂದ ಸ್ವಾಮಿಜಿಗೆ ಕೇಳಿದ್ದೇವೆ! ನೋಡೋಣ.

ಇನ್ನು ಲೋಕೇಶನ್, ಸ್ಕ್ರಿಪ್ಟ್, ಡೈಲಾಗ್ ಮುಖ್ಯವಾಗಿ ಪ್ರೋಡುಸರ್ ಹುಡುಕಬೇಕು. ಕನ್ನಡ ಕಲಾಭಿಮಾನಿಗಳು ನಮ್ಮನ್ನು ಕೈ ಬಿಡೋಲ್ಲ ಅಂತ ನಂಬಿಕೆಯ ಮೇಲೆ "ಅಮಾವಾಸ್ಯೆ" ಯ ಒಳ್ಳೆಯ ದಿನದಂದು ಮುಹೂರ್ತ ಮಾಡಿ ಆಗಿದೆ.

ಇದೀಗ್ ಬಂದ ಸುದ್ದಿ ! ನಮ್ಮ ಮಿಲ್ಟ್ರಿ ಪೋಲಿಸ್ ಪಾರ್ಟ್ ಗೆ ಒಪ್ಪಿದ್ದಾರೆ. ಸಧ್ಯ ನಿರ್ದೇಶನ ಮತ್ತು ಛಾಯಾಗ್ರಹಣದ  ಸಂಭಾವನೆ ಮಾತ್ರ ಕೊಟ್ರೆ ಸಾಕಂತೆ.

ವಿಶೇಷ ಸೂಚನೆ: ಹೀರೋಯಿನ್ ಹುಡುಕಾಟ ಭರದಿಂದ ಸಾಗಿದೆ. ನಿಮ್ಮ ಸುಂದರವಾದ (!?) ಫೋಟೋ ನಮಗೆ ಕಳಿಸಿ ಕೊಡಿ. (ಸಿನೆಮಾ ಹೆಸರಿನಂತೆ ಇದ್ದರೆ ಬೇಡ ). ಆಯ್ಕೆ ದಿನಾಂಕ ತಿಳಿಸಲಾಗುವುದು.